ಕಿಗ್ಗ

 ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ, ಶೃಂಗೇರಿಯಿಂದ ಪಶ್ಚಿಮಕ್ಕೆ 6 ಮೈ. ದೂರದಲ್ಲಿರುವ ಒಂದು ಗ್ರಾಮ. ಇಲ್ಲಿ ಇತಿಹಾಸಪ್ರಸಿದ್ಧವಾದ ಋಷ್ಯಶೃಂಗೇಶ್ವರ ದೇವಾಲಯವಿದೆ. ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿತವಾಗಿರುವ ಈ ಸುಂದರ ದೇವಾಲಯದಲ್ಲಿ ಚಾಳುಕ್ಯರ ಕಾಲದ ಶಾಸನಗಳು ಕಂಡು ಬಂದರೂ ಈಗಿರುವ ಕಟ್ಟಡ ಪ್ರಾಯಶಃ ವಿಜಯನಗರ ಕಾಲದ ಆದಿಭಾಗಕ್ಕೆ ಸೇರಿದುದಾಗಿದೆ. ಎರಡು ಪ್ರಾಕಾರಗಳಿಂದ ಆವೃತವಾಗಿರುವ ಈ ದೇವಾಲಯದಲ್ಲಿ ಗರ್ಭಗೃಹ, ಸುಕನಾಸಿ ಮತ್ತು ಪ್ರದಕ್ಷಿಣ ಪಥಗಳಿವೆ. ಗರ್ಭಗುಡಿಯ ಬಲಬದಿಯಲ್ಲಿರುವ ಸಣ್ಣ ಗುಡಿಯೊಂದರಲ್ಲಿ ಗಣಪತಿಯ ವಿಗ್ರಹವೂ ಎಡಬದಿಯ ಗುಡಿಯಲ್ಲಿ ಮಹಿಷಾಸುರ ಮರ್ದಿನಿಯ ಶಿಲ್ಪವೂ ಸ್ಥಾಪಿತವಾಗಿವೆ. ಗರ್ಭಗುಡಿಯಲ್ಲಿಯ 5 ಅಡಿ ಎತ್ತರದ ಲಿಂಗಕ್ಕೆ ಮೂರು ಕೋಡುಗಳಿವೆ. ಎಡಪಕ್ಕದ ಕೋಡು ಪತ್ನಿ ಶಾಂತಳ ಪ್ರತೀಕ. ಮುಂಭಾಗದಲ್ಲಿರುವ ಮೂರನೆಯ ಕೋಡು ನಂದಿಯ ಪ್ರತೀಕ.

 ನವರಂಗದಲ್ಲಿರುವ ಸ್ತಂಭಗಳು ಕೆಳಭಾಗದಲ್ಲಿ ಚಚ್ಚೌಕನೆಯ ತಳಹದಿಯ ಮೇಲೆ ಅಷ್ಟಮುಖವಾಗಿಯೂ ಮೇಲ್ಭಾಗದಲ್ಲಿ ಗುಂಡಾಗಿಯೂ ಇವೆ. ಈ ಸ್ತಂಭಗಳ ಫಲಕಗಳ ಮೇಲೆ ವಿಜಯನಗರ ಶೈಲಿಯ ಕೆತ್ತನೆಗಳಿವೆ. ವೇಶ್ಯಾಸ್ತ್ರೀಯರು ಋಷ್ಯ ಶೃಂಗನನ್ನು ಲೋಮಪಾದನ ರಾಜಧಾನಿಗೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಇವುಗಳ ಪೈಕಿ ಮುಖ್ಯವಾದ್ದು. ಮುಖಮಂಟಪದಲ್ಲಿರುವ ಆರು ಸ್ತಂಭಗಳಲ್ಲಿ ನಾಲ್ಕು ಎಂಟುಮುಖಗಳನ್ನುಳ್ಳವು. ಅವುಗಳ ಮೇಲೆ ಚಕ್ರಾಕಾರದ ಬೋದಿಗೆಗಳಿವೆ. ದ್ರಾವಿಡ ಶೈಲಿಯ ಈ ಮಂಟಪದ ಮುಂಭಾಗದ ಎರಡು ಸ್ತಂಭಗಳ ಮೇಲೆ ಆನೆಗಳನ್ನು ಎದುರಿಸುತ್ತಿರುವ ಸಿಂಹವಾಹನರಾದ ಮಾನವರ ಚಿತ್ರಗಳನ್ನು ಕಾಣಬಹುದು. ದೇವಾಸ್ಥಾನದ ನೈಋತ್ಯ ಮೂಲೆಯಲ್ಲಿ ನಂದಿಯ ವಿಗ್ರಹವಿದೆ. ಇದು ಹೊರಗಿನಿಂದ ತರಲಾದ್ದು. ಇದರ ಶಿಲ್ಬ ಸರಳ, ನೈಜ. ಇದು ಪಲ್ಲವರ ಕಾಲದ್ದಾಗಿರಬಹುದು. 

(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ